ಕೌಟಿಲ್ಯ	
ಭಾರತದ ಪ್ರಸಿದ್ಧ ರಾಜನೀತಿಜ್ಞ. ವಿಷ್ಣುಗುಪ್ತ, ಚಾಣಕ್ಯ ಎಂಬ ಅಭಿಧಾನಗಳೂ ಇವನಿಗುಂಟು. ಈತ ಕುಟಲನೆಂಬ ಗೋತ್ರಪ್ರವರ್ತಕನ ವಂಶದಲ್ಲಿ ಹುಟ್ಟಿದ್ದರಿಂದ ಇವನ ಹೆಸರು ಕೌಟಿಲ್ಯನೆಂದೂ ಚಣಕ ದೇಶದಲ್ಲಿ ಜನಿಸಿದವನಾದ್ದರಿಂದ ಚಾಣಕ್ಯನೆಂದೂ ಇವನಿಗೆ ತಂದೆತಾಯಿಗಳಿಟ್ಟ ಹೆಸರು ವಿಷ್ಣುಗುಪ್ತನೆಂದೂ ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ತಕ್ಷಶಿಲೆಯ ಬ್ರಾಹ್ಮಣ ಮನೆತನಕ್ಕೆ ಸೇರಿದ ಈತ ನಂದವಂಶದ ಕೊನೆಯ ರಾಜನನ್ನು ಸಿಂಹಾಸನದಿಂದ ಉರುಳಿಸಿ, ಚಂದ್ರಗುಪ್ತ ಮೌರ್ಯನಿಂದ ರಾಜ್ಯಸ್ಥಾಪನೆ ಮಾಡಿಸಿದನೆಂದು ಪ್ರತೀತಿ ಇದೆ. ಸಾಮ್ರಾಜ್ಯಸ್ಥಾಪನೆಯ ಅನಂತರ ಇವನು ಚಂದ್ರಗುಪ್ತ ಮೌರ್ಯನ ಪ್ರಧಾನಮಂತ್ರಿಯಾಗಿದ್ದ ರಾಜ್ಯಭಾರವನ್ನು ವ್ಯವಸ್ಥಿತಗೊಳಿಸಲು ಬಹುಮಟ್ಟಿಗೆ ಕಾರಣನಾದ. ಚಂದ್ರಗುಪ್ತನ ತರುವಾಯ ಸಿಂಹಾಸನವನ್ನೇರಿದ ಬಿಂದುಸಾರನ ಕಾಲದಲ್ಲೂ ಸ್ವಲ್ಪಕಾಲ ಪ್ರಧಾನಿಯಾಗಿದ್ದನೆಂದು ಕಾಣುತ್ತದೆ. ಇವನ ಅರ್ಥಶಾಸ್ತ್ರವೆಂಬ ರಾಜನೀತಿಗ್ರಂಥ ಕ್ರಿ.ಪೂ. 325-296 ಸುಮಾರಿನಲ್ಲಿ ರಚಿತವಾದ್ದೆಂದು ಹೇಳಲಾಗಿದೆ. ಕ್ರಿ.ಶ. 3ನೆಯ ಶತಮಾನದಲ್ಲಿ ಈ ಗ್ರಂಥ ರಚಿತವಾಗಿರಬಹುದೆಂಬ ಅಭಿಪ್ರಾಯವೂ ಉಂಟು. ಮೈಸೂರಿನ ಪ್ರಾಚ್ಯ ಸಂಶೋಧನಾಲಯದಲ್ಲಿ ಗ್ರಂಥಪಾಲಕರಾಗಿದ್ದ ಆರ್.ಶಾಮಶಾಸ್ತ್ರಿಗಳು 1909ರಲ್ಲಿ ಈ ಗ್ರಂಥವನ್ನು ಪ್ರಕಟಿಸಿದರು. ಅನಂತರ ತಿರುವನಂತಪುರದ ಟಿ.ಗಣಪತಿಶಾಸ್ತ್ರಿಯವರೂ ಈ ಗ್ರಂಥವನ್ನು ಸಂಪಾದಿಸಿ ಪ್ರಕಟಿಸಿದರು. ಈ ಗ್ರಂಥದ ಮೇಲೆ ಅನೇಕ ಟೀಕೆ ಟಿಪ್ಪಣಿಗಳು ಬಂದಿವೆ. ಇದು ಇಂಗ್ಲಿಷ್, ಫ್ರೆಂಚ್, ಜರ್ಮನ್ ಮುಂತಾದ ಅನೇಕ ಆಧುನಿಕ ಭಾಷೆಗಳಿಗೆ ಭಾಷಾಂತರವಾಗಿದೆ. ಪ್ರಾಚೀನ ಭಾರತದ ರಾಜನೀತಿ, ಧರ್ಮ ಮತ್ತು ಸಾಮಾಜಿಕ ಜೀವನಗಳನ್ನು ರೂಪಿಸುವ ಕಾರ್ಯದಲ್ಲೂ ಈ ಸಂಬಂಧವಾಗಿ ಅನಂತರಕಾಲದಲ್ಲಿ ರಚಿತವಾದ ಗ್ರಂಥಗಳ ಮೇಲೂ ಕೌಟಿಲ್ಯನ ಅರ್ಥಶಾಸ್ತ್ರ ತುಂಬ ಪ್ರಭಾವ ಬೀರಿತು. ಕೆಲವು ಆಧುನಿಕ ವಿದ್ವಾಂಸರು ಈ ಗ್ರಂಥವನ್ನು ಇಟಲಿಯ ಮಧ್ಯಕಾಲೀನ ರಾಜನೀತಿಜ್ಞ ಮ್ಯಾಕಿಯವೆಲಿಯ ಇಲ್ ಪ್ರಿನ್ಸಿಪೆ (ದಿ ಪ್ರನ್ಸ್) ಎಂಬ ಗ್ರಂಥದೊಂದಿಗೆ ಹೋಲಿಸಿ ಕೌಟಿಲ್ಯನನ್ನು ಭಾರತದ ಮ್ಯಾಕಿಯವೆಲಿ ಎಂದು ಕರೆದಿರುವುದು ಅಷ್ಟು ಸಮಂಜಸವಲ್ಲ. ಕೌಟಿಲ್ಯನನ್ನು ಗ್ರೀಸಿನ ಅರಿಸ್ಟಾಟಲಿಗೆ ಹೋಲಿಸಬಹುದೆಂದು ಮತ್ತೆ ಕೆಲವರು ವಾದಿಸಿರುವುದೇ ಸೂಕ್ತವೆಂದು ಕಾಣುತ್ತದೆ.

	ಈ ಗ್ರಂಥದಲ್ಲಿ ಸರ್ಕಾರದ ಆಡಳಿತ ರೀತಿನೀತಿ, ರಾಜಧರ್ಮ, ಮಂತ್ರಿಗಳೇ ಮುಂತಾದ ಆಡಳಿತಾಧಿಕಾರಿಗಳ ನಡೆವಳಿಕೆ, ಅಂತರರಾಷ್ಟ್ರೀಯ ವ್ಯವಹಾರ ನಿರ್ವಹಣೆ ಮುಂತಾದ ವಿಷಯಗಳ ಬಗ್ಗೆ ಭಾರತೀಯ ದೃಷ್ಟಿಕೋನವನ್ನು ಕೌಟಿಲ್ಯ ಹೊರಗೆಡಹಿದ್ದಾನೆ. ತನ್ನ ಗ್ರಂಥದಲ್ಲಿ ರಾಜ್ಯಾಡಳಿತ, ನ್ಯಾಯಾಂಗ ವಿಧಿನಿಯಮಗಳು, ಯುದ್ಧನೀತಿ ಮತ್ತು ತಂತ್ರಗಳು, ಆಸ್ತಿಯ ವಿನಿಮಯದ ಬಗ್ಗೆ ಅನುಸರಿಸಬೇಕಾದ ನಿಯಮಗಳು, ಸಾಮಾಜಿಕ ಜೀವನದ ಕಟ್ಟುಪಾಡುಗಳು-ಇವೆಲ್ಲವನ್ನೂ ಪರಿಶೀಲಿಸಿದ್ದಾನೆ. ಧಾರ್ಮಿಕ ದೃಷ್ಟಿ ಪ್ರಧಾನವಾಗಿದ್ದರೂ ತನ್ನ ಗ್ರಂಥದಲ್ಲಿ ಲೌಕಿಕ ಉಪಯುಕ್ತತೆಗೆ ಪ್ರಾಧಾನ್ಯ ನೀಡಿದ್ದಾನೆ. ಒಟ್ಟಿನಲ್ಲಿ ಕೌಟಿಲ್ಯನ ಅರ್ಥಶಾಸ್ತ್ರ ಕೇವಲ ಆದರ್ಶನೀತಿನಿಯಮಗಳ ಸಂಗ್ರಹಗ್ರಂಥವಾಗಿರದೆ ಪ್ರಜಾಹಿತೈಷಿಯಾದ ರಾಜ ನಿತ್ಯವೂ ಅನುಸರಿಸಬೇಕಾದ ಮಾರ್ಗಗಳನ್ನು ತಿಳಿಸುವ ಉತ್ತಮ ಮಾರ್ಗದರ್ಶಿ ಗ್ರಂಥವಾಗಿದೆ.

	ಶಾಸ್ತ್ರಗಳನ್ನು ತ್ರಯೀ, ಆನ್ವೀಕ್ಷಿಕೀ, ವಾರ್ತಾ ಮತ್ತು ದಂಡನೀತಿ ಎಂದು ನಾಲ್ಕಾಗಿ ವಿಭಾಗ ಮಾಡುವ ಪ್ರಾಚೀನ ಸಂಪ್ರದಾಯವನ್ನೇ ಕೌಟಿಲ್ಯನೂ ಅನುಸರಿಸಿದ್ದಾನೆ. ವೇದ ಮತ್ತು ಅದಕ್ಕೆ ಸಂಬಂಧಿಸಿದ ಶಾಸ್ತ್ರಗಳು ತ್ರಯೀ, ಅದು ಧರ್ಮಾಧರ್ಮಗಳ ತಿಳಿವಳಿಕೆಯನ್ನುಂಟುಮಾಡಿ, ವರ್ಣಾಶ್ರಮಧರ್ಮಗಳಿಗನುಗುಣವಾಗಿ ನಡೆಯುವುದರಿಂದ ಉಂಟಾಗುವ ಪ್ರಯೋಜನ, ಅವನ್ನು ಮೀರಿದರೆ ಒದಗುವ ಆಪತ್ತು, ಇವನ್ನು ತಿಳಿಸಿದೆ. ಅನ್ವೀಕ್ಷಿಕೀ ತತ್ತ್ವಶಾಸ್ತ್ರ ಕಾರ್ಯಕಾರಣಗಳ ತಿಳಿವನ್ನು ಬಲಪಡಿಸಿ, ಮನಸ್ಸನ್ನು ಕ್ಲೇಶಗಳಿಗೀಡಾಗದಂತೆ ಹದಗೊಳಿಸುತ್ತದೆ. ಕೃಷಿ, ಪಶುಪಾಲನೆ, ಕೈಗಾರಿಕೆಗಳನ್ನು ತಿಳಿಸುವುದು ವಾರ್ತಾ, ಆಡಳಿತದ ರೀತಿನೀತಿಗಳನ್ನು ತಿಳಿಸುವುದು ದಂಡನೀತಿ-ಅಥವಾ ಅರ್ಥಶಾಸ್ತ್ರ.

	ಕೌಟಿಲ್ಯನ ಅರ್ಥಶಾಸ್ತ್ರವನ್ನು 15 ಅಧಿಕರಣಗಳಾಗಿ ವಿಭಾಗಿಸಿದೆ. ಒಂದನೆಯ ಅಧಿಕರಣದಲ್ಲಿ ರಾಜಕುಮಾರನ ಪೋಷಣೆ ಮತ್ತು ವಿದ್ಯಾಭ್ಯಾಸಗಳಿಗೆ ಸಂಬಂಧಪಟ್ಟ ವಿಚಾರ ತಿಳಿಸಲಾಗಿದೆ. ರಾಜಕುಮಾರ ವೇದವೇದಾಂಗಗಳಿಂದ ಕೂಡಿದ ಧರ್ಮವನ್ನೂ ಅರ್ಥಶಾಸ್ತ್ರ, ಕೃಷಿ, ಪಶುಪಾಲನೆ, ವಾಣಿಜ್ಯ, ಕೈಗಾರಿಕೆ, ರಾಜನೀತಿ ಮತ್ತು ದಂಡನೀತಿಗಳನ್ನೂ ಅಭ್ಯಸಿಸಬೇಕು. ಅವನ ಮಂತ್ರಿಗಳ ಮತ್ತು ಆಸ್ಥಾನಿಕರ ಬಗ್ಗೆಯೂ ವಿವರಗಳನ್ನು ಕೊಟ್ಟಿದೆ. ಇವುಗಳಲ್ಲದೆ, ಅವನನ್ನು ಕೊಲ್ಲಲೆಳಸುವ, ಅವನ ವಂಶದ ರಾಜಕುಮಾರರಿಂದ ಆರಂಭಿಸಿ ಸಾಮಾನ್ಯ ಪ್ರಜೆಯವರೆಗೆ ಅವನ ರಾಜ್ಯದ ಎಲ್ಲ ಉಚ್ಚ ನೀಚ ವರ್ಗಗಳ ಜನರ ಮೇಲೆ ಭದ್ರವಾದ ಹಿಡಿತವನ್ನಿರಿಸಲು ಸಹಕರಿಸುವ ಗೂಢಚಾರರ ಬಗ್ಗೆಯೂ ತಿಳಿಸಲಾಗಿದೆ.

	ಪರರಾಷ್ಟ್ರಗಳಲ್ಲಿರುವ ರಾಯಭಾರಿಗಳು ಅವನ ಪ್ರತಿನಿಧಿಗಳಾಗಿಯೂ ಗೂಢಚಾರರಾಗಿಯೂ ಇರಬೇಕು. ಗೂಢಚಾರರು ದೇಶದಲ್ಲಿ ಏನೆಲ್ಲ ಆಗುತ್ತದೋ ಅದನ್ನೆಲ್ಲ ರಾಜನಿಗೆ ತಿಳಿಸುತ್ತಿರಬೇಕು. ರಾಜನ ಅಂತಃಪುರಕ್ಕೆ ವಿಶೇಷ ಗಮನವೀಯಲಾಗಿದೆ. ಅಲ್ಲಿ ಇವನಿಗೆ ಒದಗಬಹುದಾದ ಅಪಾಯಗಳನ್ನು ಕುರಿತ ಹೆಚ್ಚಿನ ವಿವೇಚನೆಯಿದೆ. ಅಂತಃಪುರದಲ್ಲಿ ಕೊಲೆ ಮಾಡಲ್ಪಟ್ಟ ಪ್ರಸಿದ್ಧ ಅರಸರನ್ನು ಉದಾಹರಣೆಗಾಗಿ ಹೇಳಿದೆ. ಅರಮನೆಯಲ್ಲಿ ಮಾತ್ರವಲ್ಲದೆ, ಬೀದಿ ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿಯೂ ರಾಜ ಕೊಲೆಗೆ ಗುರಿಯಾಗದಂತೆ ಕೈಗೊಳ್ಳಬೇಕಾದ ರಕ್ಷಣೆಯ ಅಗತ್ಯವನ್ನು ವಿವರಿಸಿದೆ. ರಾಜ್ಯದಲ್ಲಿ ಆಡಳಿತದ ಮೇಲೆ ಸಂಪೂರ್ಣ ಹಿಡಿತವನ್ನು ಪರಿಣಾಮಗೊಳಿಸುವ ದೊಡ್ಡ ಪರಿವೀಕ್ಷಕ ದಳದ ಕರ್ತವ್ಯವನ್ನು ಎರಡನೆಯ ಅಧಿಕರಣದಲ್ಲಿ ತಿಳಿಸಿದೆ. ಮೂರನೆಯ ಅಧಿಕರಣದಲ್ಲಿ ಕಾನೂನಿನ ವಿವರಣೆಯುಂಟು. ಪೋಲೀಸ್ ಕಾರ್ಯ ಮತ್ತು ಕಠಿಣಶಿಕ್ಷೆಗಳಿಂದ ದುಷ್ಟರನ್ನು ಅಡಗಿಸುವ ವಿಧಾನ, ವಂಚಕ ವ್ಯಾಪಾರಿಗಳ ಮೋಸದ ತೂಕ ಅಳತೆಗಳ ಮತ್ತು ಕೃತಕವಾಗಿ ವಸ್ತುಗಳ ಬೆಲೆಯನ್ನು ಏರಿಸುವುದರ ವಿರುದ್ಧವಾಗಿ ತೆಗೆದುಕೊಳ್ಳಬೇಕಾದ ಜಾಗ್ರತಾ ಕ್ರಮಗಳು-ಇವನ್ನು ನಾಲ್ಕನೆಯ ಅಧಿಕರಣದಲ್ಲಿ ವಿವರಿಸಿದೆ. ರಾಜ ಮೋಸಗಾರನಾದ ಮಂತ್ರಿಯನ್ನು ನಾಶಮಾಡುವ ಕ್ರಮ, ತೆರಿಗೆಗಳನ್ನು ವಸೂಲು ಮಾಡುವ ಕ್ರಮ, ಕೃಷಿಕರಿಂದ ಮತ್ತು ಕೈಕಸಬುದಾರರಿಂದ ಸಾಮಗ್ರಿಗಳನ್ನು ವಸೂಲು ಮಾಡಿ ಸಂಗ್ರಹಿಸುವುದು, ಗೂಢಚಾರರು ಶ್ರೀಮಂತರನ್ನು ದಾನ ಮಾಡುವಂತೆ ಪ್ರಚೋದಿಸುವುದು ಮತ್ತು ಕೆಟ್ಟ ಶ್ರೀಮಂತರ ಸ್ವತ್ತನ್ನು ರಾಜ್ಯಭಂಡಾರಕ್ಕೆ ಸೇರಿಸುವುದು, ರಾಜಸೇವಕರ ವಾರ್ಷಿಕ ವೇತನಕ್ರಮ-ಮುಂತಾದವನ್ನು ಐದನೆಯ ಅಧಿಕರಣದಲ್ಲಿ ವಿವರಿಸಿದೆ. ಆರನೆಯ ಅಧಿಕರಣದಲ್ಲಿ ರಾಜ, ಮಂತ್ರಿ, ಭೂಮಿ, ಕೋಟೆ, ಕೋಶ, ಸೇನೆ ಮತ್ತು ಮಿತ್ರರ ಬಗ್ಗೆ ವಿವರಗಳೂ ರಾಷ್ಟ್ರಾಂತರ ಸಂಬಂಧದ ವಿವರಣೆಯೂ ಇವೆ. ಶಾಂತಿ, ಯುದ್ಧ ತಾಟಸ್ಥ್ಯ ವಿಜಯಯಾತ್ರೆಗೆ ಸನ್ನಾಹ, ಒಪ್ಪಂದ, ಅನಿಶ್ಚಿತ ವರ್ತನೆಗಳು ಎಂಬ ಆರು ರಾಜಕಾರ್ಯಗಳ ವಿವೇಚನೆಗೆ ಏಳನೆಯ ಅಧಿಕರಣ ಮೀಸಲು, ಜೂಜು, ಬೇಟೆ, ಸ್ತ್ರೀ ಮತ್ತು ಮದ್ಯಗಳಿಗೆ ರಾಜ ಬಲಿ ಬೀಳುವುದರಿಂದ ಉಂಟಾಗಬಹುದಾದ ಅಪಾಯಗಳನ್ನು ಮತ್ತು ಬೆಂಕಿ, ನೀರು ಮತ್ತು ಇತರ ವಿಷಯಗಳು ತರಬಹುದಾದ ತೊಂದರೆಗಳನ್ನು ಎಂಟನೆಯ ಅಧಿಕರಣದಲ್ಲಿ ಕೌಟಿಲ್ಯ ವಿವರಿಸಿದ್ದಾನೆ. ಒಂಬತ್ತು ಮತ್ತು ಹತ್ತನೆಯ ಅಧಿಕರಣಗಳಲ್ಲಿ ಯುದ್ಧದ ವಿಚಾರವಿದೆ. ನೇರವಾದ ಯುದ್ಧವನ್ನು ತಪ್ಪಿಸಲು ಬೇಕಾದಷ್ಟು ಸಂದರ್ಭವನ್ನು ರಾಜನಿಗೊದಗಿಸಲಾಗಿದೆ. ನೇರ ಹೋರಾಟ ನಡೆಯಬೇಕಾದ ಸಂದರ್ಭದಲ್ಲಿ ಸೈನಿಕರನ್ನು ಹುರಿದುಂಬಿಸುವ ರೀತಿಯನ್ನು ಹೇಳಲಾಗಿದೆ. ಜ್ಯೋತಿಷ್ಕರು, ಪುರೋಹಿತರು ಮತ್ತು ಇತರ ರಾಜನಿಷ್ಠರು ಈ ಕೆಲಸದಲ್ಲಿ ರಾಜನಿಗೆ ಸಹಾಯ ಮಾಡಬೇಕು. ಯುದ್ಧದಲ್ಲಿ ಕುಹಕೋಪಾಯವೇ ಮುಖ್ಯ ಎಂದು ವಿವರಿಸಿದೆ. ಹನ್ನೊಂದನೆಯ ಅಧಿಕರಣದಲ್ಲಿ ಶತ್ರುಸೈನ್ಯದ ಅಧಿಕಾರವರ್ಗದಲ್ಲಿರುವ ಒಗ್ಗಟ್ಟನ್ನು ನಾಶಪಡಿಸಲು ಕಲಹದ ಬೀಜವನ್ನು ರಾಜ ಬಿತ್ತಬೇಕಾದ ವಿಧಾನ ಮತ್ತು ಈ ಕಾರ್ಯಕ್ಕೆ ಸ್ತ್ರೀಯರ ನೆರವು-ಇವನ್ನು ವಿವರಿಸಿದೆ. ಹನ್ನೆರಡನೆಯ ಅಧಿಕರಣದಲ್ಲಿ ಗೂಢಚಾರ, ಗುಪ್ತಸಹಾಯಕ, ಕೊಲೆಗಡುಕ, ಸೆರೆಯಾಳು ಮತ್ತು ಸ್ತ್ರೀಯರ ನೆರವಿನಿಂದ ಒಬ್ಬ ದುರ್ಬಲರಾಜ ತನ್ನ ಬಲವನ್ನು ಹೆಚ್ಚಿಸಿಕೊಳ್ಳಬಹುದಾದ ರೀತಿಯನ್ನೂ ಶತ್ರುರಾಜನನ್ನು ಮೋಸದಿಂದ ಕೊಲ್ಲುವ ವಿಧಾನಗಳನ್ನೂ ವಿವರಿಸಿದೆ. ಹದಿಮೂರನೆಯ ಅಧಿಕರಣದಲ್ಲಿ ರಾಜನ ಪಾಂಡಿತ್ಯ ಮತ್ತು ಅವನ ಗುಣಾತಿಶಯಗಳನ್ನು ಮತ್ತು ದೈವದೊಲುಮೆಯನ್ನು ಪ್ರಚಾರ ಮಾಡಿ, ಶತ್ರುಗಳನ್ನು ಹೆದರಿಸಿಡುವ ಕ್ರಮವನ್ನೂ ಇದಕ್ಕೆ ಗೂಢಚಾರರಿಂದ ಮತ್ತು ಇತರರಿಂದ ಸಹಾಯ ಪಡೆದು ತಮ್ಮ ನೆರವಿಗೆ ಉಪಯೋಗಿಸಿಕೊಳ್ಳುವುದನ್ನೂ ಜನರ ಮೂಢ ನಂಬಿಕೆಗಳು ಮತ್ತು ವಿಶ್ವಾಸವನ್ನು ಬಳಸಿಕೊಳ್ಳುವ ಬಗೆಯನ್ನೂ ವಿವರಿಸಿದೆ. ಒಬ್ಬನನ್ನು ಕೊಲ್ಲಲು, ಕುರುಡು ಮಾಡಲು, ಇಲ್ಲವೆ ಬುದ್ಧಿಭ್ರಮಣೆಗೊಳಿಸಲು ಔಷಧ ಮತ್ತು ಮಂತ್ರಗಳ ಬಳಕೆ, ಬಣ್ಣ ಬದಲಾಯಿಸುವುದು, ಮನುಷ್ಯರು ಮತ್ತು ಪ್ರಾಣಿಗಳು ನಿದ್ದೆಮಾಡುವಂತೆ ಮಾಡುವ ಕ್ರಮ, ಕತ್ತಲೆಯಲ್ಲಿ ನೋಡುವುದು, ಬೆಂಕಿಯಲ್ಲಿ ಅಪಾಯವಾಗದಂತೆ ರಕ್ಷಣೆ-ಇವು ಹದಿನಾಲ್ಕನೆಯ ಅಧಿಕರಣದ ವಿಷಯಗಳು. ಕೊನೆಯದಾದ ಹದಿನೈದನೆಯ ಅಧಿಕರಣದಲ್ಲಿ ಗ್ರಂಥದ ಯೋಜನೆಯನ್ನೂ ವಾದದಲ್ಲಿ ಅನುಸರಿಸಬೇಕಾದ ಮೂವತ್ತೆರಡು ಸೂತ್ರಗಳನ್ನೂ ಉದಾಹರಣೆಗಳೊಡನೆ ವಿವರಿಸಲಾಗಿದೆ. 						  					(ಬಿ.ಎಸ್.ಎಚ್.; ಎ.ವಿ.ವಿ.; ಕೆ.ಕೆ.; ಜಿ.ಎಸ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ